ಚಾಲ್ತಿ ಲೆಕ್ಕ-
ಪರಸ್ಪರ ಸಂಬಂಧ ಇರುವ ಇಬ್ಬರು ವ್ಯಕ್ತಿಗಳ, ಎರಡು ಸಂಸ್ಥೆಗಳ, ಅಥವಾ ಸಂಸ್ಥೆ ಮತ್ತು ವ್ಯಕ್ತಿಗಳ ನಡುವೆ ನಗದು, ಸರಕು ಮುಂತಾದವುಗಳ ರೂಪದಲ್ಲಿ ಜರುಗುವ ವಹಿವಾಟುಗಳ ಯಾದಿಯಾಗಿ ಚಾಲೂ ಆಗಿರುವ ಖಾತೆ; ಒಂದು ಪಾಲುದಾರಿಕೆ ಸಂಸ್ಥೆಯ ಪಾಲುದಾರ ಆ ಸಂಸ್ಥೆಯಿಂದ ತನ್ನ ಸ್ವಂತ ಉಪಯೋಗಕ್ಕಾಗಿ ಮಾಡುವ ಹಣದ ಸೆಳೆತವೇ ಮುಂತಾದ ವಹಿವಾಟುಗಳ ದಾಖಲೆಗಳನ್ನೊಳಗೊಂಡ ಖಾತೆಯನ್ನೂ ಚಾಲ್ತಿ ಖಾತೆ ಎಂದು ಕರೆಯಲಾಗುತ್ತದೆ (ಕರೆಂಟ್ ಅಕೌಂಟ್). ಪರಸ್ವರ ಸಂಬಂಧ ಇರುವ ವ್ಯಕ್ತಿ, ಸಂಸ್ಥೆಗಳ ನಡುವಣ ಚಾಲ್ತಿ ಲೆಕ್ಕದ ಸಿಲ್ಕನ್ನು ಸಾಮಾನ್ಯವಾಗಿ ನಿಯತಕಾಲಿಕವಾಗಿ ಚುಕ್ತಾ ಮಾಡಬೇಕೆಂಬ ನಿಯಮ ಇರುವುದಿಲ್ಲ. ಸಂಸ್ಥೆಯಲ್ಲಿ ಪಾಲುದಾರರು ಹೊಂದಿರುವ ಬಂಡವಾಳವನ್ನು ಸಾಮಾನ್ಯವಾಗಿ ಪ್ರತ್ಯೇಕವಾಗಿ ಅವರ ಬಂಡವಾಳ ಖಾತೆಗಳ ಅಡಿಯಲ್ಲಿ ತೋರಿಸಲಾಗುತ್ತದೆ. ಪಾಲುದಾರಿಕೆ ಸಂಸ್ಥೆಯಿಂದ ಪಾಲುದಾರನಿಗೆ ಸಂದಾಯವಾಗಬೇಕಾಗಿರಬಹುದಾದ ಸಂಬಳ, ಬಂಡವಾಳದ ಮೇಲಣ ಬಡ್ಡಿ, ಲಾಭದಲ್ಲಿ ಅವನ ಪಾಲು, ಸ್ವಂತ ಉಪಯೋಗಕ್ಕಾಗಿ ಅವನು ಸಂಸ್ಥೆಯಿಂದ ತೆಗೆದುಕೊಂಡ ನಗದು ಸರಕು ಮುಂತಾದವು, ಇವುಗಳ ಮೊಬಲಗಿನ ಮೇಲೆ ಕೊಡಬೇಕಾಗಿರುವ ಬಡ್ಡಿ ಮುಂತಾದವನ್ನೆಲ್ಲ ಪ್ರತ್ಯೇಕವಾಗಿ ಅವನ ಚಾಲ್ತಿ ಖಾತೆಯಲ್ಲಿ ದಾಖಲಿಸಲಾಗುತ್ತದೆ. ಲೆಕ್ಕದ ವರ್ಷದ ಅಥವಾ ಅವಧಿಯ ಕೊನೆಯಲ್ಲಿ ಈ ಖಾತೆಯ ಶಿಲ್ಕನ್ನು ಅವನ ಬಂಡವಾಳ ಖಾತೆಗೆ ವರ್ಗಮಾಡಬಹುದು; ಪಾಲುದಾರರ ಬಂಡವಾಳಗಳು ಸ್ಥಿರವಾಗಿದ್ದ ಪಕ್ಷದಲ್ಲಿ ಪಾಲುದಾರರ ಚಾಲ್ತಿ ಖಾತೆಗಳ ಶಿಲ್ಕುಗಳನ್ನು ಅವರ ಬಂಡವಾಳ ಖಾತೆಗಳಿಗೆ ವರ್ಗ ಮಾಡುವ ಬದಲು ಮುಂದಿನ ಅವಧಿಯ ಆರಂಭ ಸಿಲ್ಕುಗಳಾಗಿ ಅವರ ಚಾಲ್ತಿ ಖಾತೆಗಳಲ್ಲಿ ತೋರಿಸಲಾಗುವುದು. ಬ್ಯಾಂಕಿನ ಚಾಲ್ತಿ ಠೇವಣಿ ಖಾತೆಗಳನ್ನೂ ಚಾಲ್ತಿ ಲೆಕ್ಕಗಳೆಂದು ಹೇಳುವುದುಂಟು. 						(ನೋಡಿ- ಚಾಲ್ತಿ-ಠೇವಣಿ)										(ಕೆ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ